ಅಪಸ್ಮಾರ

ಮೇಲಿಂದ ಮೇಲೆ ಪ್ರಜ್ಞೆತಪ್ಪುವ, ಇಲ್ಲವೆ ಕೈಕಾಲುಗಳಲ್ಲಿ ಸೆಳವುಗಳೇಳುವ ಲಕ್ಷಣಕೂಟ ಬೇನೆಗೆ ಈ ಹೆಸರಿದೆ (ಮೊಲ್ಲಾಗರ). ಹೀಗಾದಾಗ ಅರಿವು ತಪ್ಪಬಹುದು, ಇಲ್ಲವೆ ಬಹುಮಟ್ಟಿಗೆ ಕುಂದಿರಬಹುದು. ಹಾಗೆ ಕೆಲವು ವೇಳೆ ಬಿಗುವಿನ, ಅದುರಿ ಎಳೆಯುವ (ಕ್ಲಾನಿಕ್) ಸ್ನಾಯು ಸೆಡೆತಗಳು ಆಮೇಲೆ ಕಾಣಬಹುದು. ಯಾವ ವಯಸ್ಸಲ್ಲಾದರೂ ಮೊಲ್ಲಾಗರ ಕಾಣಿಸಬಹುದಾದರೂ, ಎಳೆತನದಲ್ಲಿ ಮೊದಲು ತಲೆದೋರುವುದೇ ಸಾಮಾನ್ಯ. ನೂರಕ್ಕೆ 20 ಮಂದಿಯಲ್ಲಿ 20 ದಾಟಿದ ಮೇಲೆ ಬರುವುದು. ಇದಕ್ಕೆ ಹೆಣ್ಣುಗಂಡೆಂಬ ಭೇದವಿಲ್ಲ. ಬಾಳಿನುದ್ದಕ್ಕೂ ಸೆಳವುಗಳು ಮರುಕಳಿಸುವುವಾದರೂ ಕೆಲವರಲ್ಲಿ ಯಾವ ಗುರುತೂ ಉಳಿಯದಂತೆ ತಂತಾನಾಗಿ ವಾಸಿಯಾಗುವುದೂ ಉಂಟು. ಒಂದು ಸಾವಿರಕ್ಕೆ ಎಂಟು-ಹತ್ತು ಮಂದಿ ಮೊಲ್ಲಾಗರದಿಂದ ನರಳುವರೆಂದು ಅಂದಾಜಾಗಿದೆ.

ಅದರ ಹಠಾತ್ತನೆಯ ವಿಚಿತ್ರ ಲಕ್ಷಣಗಳಿಂದ ಮೊಲ್ಲಾಗರ ಬಹಳ ಹಿಂದಿನ ಕಾಲದಿಂದಲೂ ಗೊತ್ತಿದೆ. ಪ್ರಪಂಚದ ಹುಟ್ಟಿನಿಂದ ಮಾನವ ಕಾಣಿಸಿಕೊಳ್ಳುವ ತನಕ ಎಲ್ಲೆಡೆಗಳಲ್ಲೂ ಇದೊಂದು ಸಮಸ್ಯೆಯಾಗಿ ಕಾಡಿದೆ. ಇದರ ಹೆಸರಿನ ಗ್ರೀಕ್ ಪದಕ್ಕೆ, ಯಾವುದೋ ಕಾಣದ ಶಕ್ತಿಯ ಸೆಳೆತವೆಂಬಂತೆ, ಸೆಳವು (ಸೀಷರ್) ಎಂಬ ಅರ್ಥ ಕೊಟ್ಟವ ಅರಬ್ಬೀ ವೈದ್ಯ ಅವಿಸೆನ್ನ (14ನೆಯ ಶತಮಾನ). ದೆವ್ವ, ಪಿಶಾಚಿ ಹಿಡಿದು ರೋಗಿ ಕೆಳಗುರುಳಿ ಒದ್ದಾಡುವನೆಂಬ ಜನಸಾಮಾನ್ಯರ ನಂಬಿಕೆಯನ್ನು ಹೋಗಲಾಡಿಸಿ, ಮೈಯಲ್ಲಿನ ವ್ಯತ್ಯಾಸಗಳಿಂದಾಗಿ ವಂಶಾನುಗತ ಬರುವ ರೋಗ ಇದೆಂದು ಹೇಳುವ ಎದೆಗಾರಿಕೆ ಹಿಪ್ಟೊಕ್ರೇಟಿಸ್‍ಗಿತ್ತು (ಕ್ರಿ.ಪೂ. 460-370).

ಮುಂದಿನ ಸುಮಾರು 2,000 ವರ್ಷಗಳಲ್ಲಿ ರೋಗದ ವಿಚಾರ ಮೂಲೆ ಸೇರಿತು. ಅಂದಿನ ರೋಗಶಾಸ್ತ್ರದ ತುಂಬ ಅಂಗಗಳ ರಸಧಾತುಗಳೇ ತುಂಬಿದ್ದು. ರೋಗಗಳಿಗೆ ಗ್ರಹಗಳ ಚಲನೆ ಕಾರಣವೆಂದಿತ್ತು. ಮೊಲ್ಲಾಗರಕ್ಕೂ ಚಂದ್ರನಿಗೂ ನಂಟು ಎಂದರು. ದೆವ್ವ ಬಿಡಿಸುವ ಚಿತ್ರಹಿಂಸೆಗಳಿಗೂ ಚಿಕಿತ್ಸೆಗಳಾಗಿದ್ದುವು. ಮೊಟ್ಟ ಮೊದಲಾಗಿ ಇಂಗ್ಲೆಂಡಿನ ತಾಮಸ್ ವಿಲ್ಲಿಸ್ (1621-75) ಮಿದುಳಿಂದ ಸೆಳವು ಬರುವುದೇ ಹೊರತು ಗುಂಡಿಗೆ ಮತ್ತಿತರ ಅಂಗಗಳಿಂದಲ್ಲವೆಂದು ತೋರಿಸಿಕೊಟ್ಟ. ಡಚ್ ವೈದ್ಯ ಬೊಯೆರೇವ್ (1668-1738) ಸೆಳವು ವಂಶಾನುಗತವಾಗಿ ಬರುವುದೆಂದು ಖಚಿತಪಡಿಸಿ, ಇದರ ಬೇರೆಬೇರೆ ಬಗೆಗಳನ್ನು ವಿವರಿಸಿದ. ಆದರೂ, ಕೆಲವು ರೋಗಿಗಳಲ್ಲಿ ದೇವರ ಕಾಟವೇ ಕಾರಣವೆಂದು ಇವರಿಬ್ಬರೂ ನಂಬಿದ್ದರು. 18ನೆಯ ಶತಮಾನದ ಕೊನೆಗೆ, ಫ್ರಾನ್ಸಿನ ವೈದ್ಯ ಟೆಸಟ್ ಮಿದುಳಿನ ಪೆಟ್ಟು, ಗಡ್ಡೆಗಳಿಗೂ ಮೊಲ್ಲಾಗರಕ್ಕೂ ಇರುವ ನೇರಸಂಬಂಧವನ್ನು ತೋರಿದ. ಮೊಲ್ಲಾಗರದ ಖಚಿತ ವಿಚಾರಗಳನ್ನು ಇಂಗ್ಲೆಂಡಿನ ಹ್ಯೂಲಿಂಗ್ಸ್ ಜಾಕ್ಸನ್ ನಿರೂಪಿಸಲು ಇನ್ನೊಂದು ಶತಮಾನ ಹಿಡಿಯಿತು. ಎದುರು ಪಕ್ಕದ ಮಿದುಳನ್ನು ಚೋದಿಸಿದರೆ ಈ ಪಕ್ಕದ ಮೈಯಲ್ಲಿ ಸೆಳವು ಕಾಣುವುದೆಂದು ತೋರಿಸಿದ. ಇವನ ಶೋಧನೆಗಳು ನಿಜಗೆಲಸದ ತಿಳಿವಳಿಕೆಗೆ ಮೂಲವಾದುವು. 1925ರ ಸುಮಾರಿನಲ್ಲಿ ಜರ್ಮನಿಯ ಮನಶ್ಶಾಸ್ತ್ರಜ್ಞ ಡಾ. ಹ್ಯಾನ್ಸ್ ಬರ್ಜರ್ ವಿದ್ಯುನ್ಮಿದುಳ ಚಿತ್ರಕವನ್ನು ಕಂಡುಹಿಡಿದು, 1931ರಲ್ಲಿ ಮಿದುಳಿನ ಕೆಲಸಗಳನ್ನು ಹೊರಗೆ ಗೆರೆಗಳಿಂದ ಚಿತ್ರಿಸಬಹುದೆಂದು ತೋರಿದ್ದು ಮತ್ತೊಂದು ಮೈಲಿಗಲ್ಲು. ಇಂಗ್ಲಿಷ್ ವೈದ್ಯ ತಾಮಸ್ ಲಿಯಕಾಕ್ (1857) ಬ್ರೊಮೈಡು ಚಿಕಿತ್ಸೆಯನ್ನು ಜಾರಿಗೆ ತಂದದ್ದೇ ಈ ರೋಗದ ಮೊದಮೊದಲ ಪರಿಹಾರ.

ಸೆಳವುಗಳ ಬಗೆಗಳು: ಮಿದುಳೊಳಗೆ ನರದ ಕೆರಳಿಕೆ ವಿಪರೀತವಾಗಿ ಮತ್ತೆ ಮತ್ತೆ ಅಸಹಜವಾಗಿ ಹೊರಚೆಲ್ಲಿ ಬರುವುದೇ ಮೊಲ್ಲಾಗರ. ಇದು ನೂರಾರು ತೆರನಾಗಿ ತೋರಬಹುದು. ಹಲವಾರು ಮಿನಿಟುಗಳು ಮೈಯೆಲ್ಲ ಒದರುವಷ್ಟು ಜೋರಾಗಿರಬಹುದು; ಕಂಡೂಕಾಣದಂತೆಯೋ ತುಸು ಎಚ್ಚರಗೆಟ್ಟೋ ಕೇವಲ ಮನಗುಂದಿಯೋ ಇರಬಹುದು. ಬೆನ್ನೆಲುಬೋ ಇನ್ನಾವುದಾದರೂ ಮೂಳೆಯೋ ಮುರಿವಷ್ಟು ಬಲವಾಗಿ ಒದರಾಡಿಸುವುದೂ ಹೆಚ್ಚಲ್ಲ. ಎಲ್ಲಿ, ಏನಾಗಿ, ಮಿದುಳಿನ ನಿಜಗೆಲಸ ಕೆಟ್ಟಿದೆ ಎನ್ನುವುದರಂತೆ ಮೊಲ್ಲಾಗರದ ಚಿಹ್ನೆ ಲಕ್ಷಣಗಳಿರುತ್ತವೆ. ಇವು ಚಾಲಕ, ಅರಿವಿನ ಇಲ್ಲವೇ ಮನಸ್ಸಿನವಾಗಿ ಇರಬಹುದಾದರೂ ಇವುಗಳ ಜೋಡಿಗಳೂ ಆಗಿರಬಹುದು.

ತೀರ ದಿಗಿಲು ಹುಟ್ಟಿಸುವ ಬಲು ಸಾಮಾನ್ಯವಾದ ಚಾಲಕಸೆಳವೆಂದರೆ, ಮೈಯೆಲ್ಲ ಆವರಿಸುವ ಗ್ರಾಂಡ್ ಮಾಲ್ ಅಥವಾ ಮೇಜರ್ ಎಪಿಲೆಪ್ಸ. ಇದೇ ನಿಜವಾದ ಮೊಲ್ಲಾಗರ. ಆರೆಪಾಲು ರೋಗಿಗಳಲ್ಲಿ ಏನೋ ಮುಂದೆ ಆಗುವುದರ ಸೂಚನೆಯಾಗಿ, ಕಣ್ಣಮುಂದೆ ಮಿಂಚಿದಂತೆ, ಮೂಗಿನಲ್ಲಿ ಬೇಡದ ವಾಸನೆ, ಹೊಟ್ಟೆತೊಳಸು, ವಿಚಿತ್ರ ಕನಸು, ಹಳೆಯ ನೆನಪುಗಳು, ಕೈಕಾಲು ಜೋಮು, ಮೈಕೈಕಾಲುಗಳ ಮೇಲೆ ಏನೋ ಹರಿದಂತೆ, ಏನೋ ದಿಗಿಲಾದಂತೆ ಸೆಳವರಿವು (ಆರ) ಮೊದಲು ಆಗುತ್ತದೆ. ರೋಗಿ ಕೂಡಲೇ ವಿರಮಿಸಲು ಮತ್ತು ರೋಗದ ಮಿದುಳಿನ ಭಾಗವನ್ನು ವೈದ್ಯ ಗುರುತಿಸಲು ಇದು ಅನುಕೂಲಿಸಬಹುದು. ಕೂಡಲೇ ರೋಗಿಗೆ ಅರಿವು ತಪ್ಪಿ ಸಣ್ಣಗಂಟಲಲ್ಲಿ ಕೀರುವನು. ಕೆರಳು ಮಿದುಳಲ್ಲಿ ಒಂದೆಡೆ ಹುಟ್ಟಿ ಮಿಕ್ಕೆಡೆಗಳಿಗೆ ಹರಡಿಕೊಂಡು, ಮೈಯೆಲ್ಲ ಬಿಗಿಯಾಗಿ ಸೆಡೆತುಕೊಳ್ಳುತ್ತದೆ. ನಿಂತಿದ್ದ ರೋಗಿ ತೊಪ್ಪನೆ ಕೆಳಗೆ ಉರುಳುವನು. ಕೈಗೆ ನಾಡಿ ಸಿಗದು. ಕಡಿವ ಹಲ್ಲುಗಳ ನಡುವೆ ಸಿಕ್ಕಿದ ನಾಲಗೆ ನೀಲಿಯಾಗುವುದು. ತೋಳುಗಳು ಎದೆಗೆ ಆನಿಸಿಕೊಂಡು ಕಾಲುಗಳು ನೀಟಿಕೊಳ್ಳುತ್ತವೆ. ತಲೆ ಹಿಂಬಾಗುವುದು. ಕಣ್ಣಿನ ಪಾಪೆಗಳು ಹಿಗ್ಗಿ, ಕಣ್ಣು ಗುಡ್ಡೆಗಳು ಮೇಲಕ್ಕೋ ಪಕ್ಕಕ್ಕೋ ಹೊರಳುತ್ತವೆ. ಮೊಗ ಬಿಳಿಚಿಕೊಂಡು ಉಸಿರು ಕಟ್ಟಿದಾಗ ನೀಲಿಗಟ್ಟಬಹುದು, ಇವೆಲ್ಲ ಅರೆಮಿನಿಟಿನೊಳಗಾಗಿ ಕಳೆದು ಅದುರು ಹಂತಕ್ಕೆ ಬರುವುದು. ಕ್ರಮವಾಗಿ ಎಡೆ ಬಿಡದೆ ಮೈ ಜಗ್ಗಿಸುವ ಸೆಡೆತಗಳು ಒಂದೆರಡು ಮಿನಿಟುಗಳು ಜಾಡಿಸುತ್ತವೆ. ಮೊಗ ವಿಕಾರವಾಗಿ, ಉಸಿರಾಟ ಆಳವಾಗಿ, ಬಾಯಲ್ಲಿ ಜೊಲ್ಲು ನೊರೆಯಾಗಿ ಉಕ್ಕುತ್ತದೆ. ಕೆನ್ನೆ, ತುಟಿ, ನಾಲಗೆ ಗಾಯವಾದರೆ, ರಕ್ತವೂ ಕಾಣುವುದು. ಮೋರೆ ಸೊಟ್ಟಗಾಗಿ ಬಾಯಿ ತೆರೆದು ಮುಚ್ಚುತ್ತಿರುವುದು. ಸೆಳವು ವಿಪರೀತವಾಗಿದ್ದರೆ, ಮಲ, ಮೂತ್ರಗಳು ತಾವಾಗಿ ಆಗುತ್ತವೆ. ರಕ್ತ ಒತ್ತಡ ಇಳಿವುದು. ಇಷ್ಟೆಲ್ಲ ಆದ ಕೂಡಲೇ ರೋಗಿ ಎಚ್ಚೆತ್ತರೂ ಕೆಲಕಾಲ ಸುಸ್ತಾಗಿ ಅರೆನಿದ್ದೆಯೋ ನಿದ್ದೆಯೋ ಮಾಡಬಹುದು. ಆದುದೇನೆಂದು ರೋಗಿಗೆ ಆರಿವಿರದು. ಮೊಲ್ಲಾಗರ ಎಲ್ಲರಲ್ಲೂ ಯಾವಾಗಲೂ ಇಷ್ಟು ಜೋರಾಗಿರದು. ತುಸು ಇಣುಕುಹಾಕಿ ಹಾಗೇ ಅಣಗಲೂಬಹುದು. ಹಾಗೇ ಸೆಳವಿನ ಮೇಲೆ ಸೆಳವು ಬಿಡುವಿಲ್ಲದೆ ಬರುತ್ತ, ಅರಿವು ತಪ್ಪಿರುವುದಕ್ಕೆ ಸ್ಟೇಟಸ್ ಎಪಿಲೆಪ್ಟಿಕಸ್ ಎನ್ನುವುದುಂಟು. ಕೂಡಲೇ ತಕ್ಕ ಚಿಕಿತ್ಸೆ ದೊರೆಯದಿದ್ದಲ್ಲಿ, ಸುಸ್ತು, ಕಟ್ಟುಸಿರು, ಜ್ವರವೇರಿಕೆ, ಮಿದುಳೊಳಗೆ ರಕ್ತಸುರಿಕೆ, ಇವುಗಳಿಂದ ರೋಗಿ ಅಸು ನೀಗಬಹುದು. ಇದರಿಂದಲೇ ಮೊಲ್ಲಾಗರದ ಎಲ್ಲ ರೋಗಿಗಳನ್ನೂ ಒಂದೇ ತಂಡದಲ್ಲಿ ಸೇರಿಸುವಂತಿಲ್ಲ. ಅಪಸ್ಮಾರ ಸೆಳವು ಹಗಲಾಗಲಿ ಇರುಳಾಗಲಿ ಇದ್ದಕ್ಕಿದ್ದಂತೆ ಯಾವಾಗಲೆಂದರೆ ಆವಾಗ ಬರುವುದು ಕೆಲವರಲ್ಲಿ ರಾತ್ರಿ ಹೊತ್ತು ಬರುವುದೇ ಸಾಮಾನ್ಯ.

ಬಹುಪಾಲು ಮಕ್ಕಳಲ್ಲಿ ಬರುವ, ಅಷ್ಟು ಜೋರೇ ಇಲ್ಲದ, ಮೊಲ್ಲಾಗರಕ್ಕೆ ಪೆಟಿಟ್ ಮಾಲ್ ಎಂದಿದೆ. ಅರಿವು ತಪ್ಪುವುದು ಕ್ಷಣಕಾಲ ಮಾತ್ರ. ಬಿರುನೋಟದೊಂದಿಗೆ, ರೆಪ್ಪೆಗಳು ಅದುರಿ ಕಣ್ಣುಗುಡ್ಡೆಗಳು ಮೇಲೇರುವುದು, ತಲೆ ತೂಗಾಟ, ತುಟಿ ನಡುಕ, ಆಕಳಿಕೆ, ಮುಂಡದಲ್ಲಿ ಜಿಲುಗುಡಿಕೆ ಇವನ್ನು ಬಿಟ್ಟರೆ ಸೆಳವು ಕಾಣುವುದೇ ಇಲ್ಲ. ಮಗು ಕಂಗೆಟ್ಟು ಕಲ್ಲಿನಂತೆ ಅಲುಗಾಡದೆ ನಿಂತಿದ್ದು, ತುಸು ಹೊತ್ತಿನಲ್ಲೇ ಎಂದಿನಂತೆ ತನ್ನ ಕೆಲಸದಲ್ಲಿ ಮುಂದುವರಿವುದು. ಕೈಯಲ್ಲಿ ಹಿಡಿದಿರುವುದು ಕೆಳಗೆ ಬಿದ್ದರೂ ಮಗು ಮಾತ್ರ ಬೀಳುವುದಿಲ್ಲ. ಕೆಲವೇಳೆ, ದಿನವೆಲ್ಲ ಹೀಗಾಗುತ್ತಿರಬಹುದು. ಎಷ್ಟೋ ವೇಳೆ ಹೀಗಾಗುತ್ತಿದ್ದುದು ಮಗುವಿಗೂ ಗೊತ್ತಾಗದೆ, ರೋಗ ಹಲವಾರು ವರ್ಷಗಳು ಯಾರ ಗಮನಕ್ಕೂ ಬಾರದಿರಬಹುದು, ಮಗು ವಯಸ್ಸಿಗೆ ಬಂದಂತೆಲ್ಲ, ಸೆಳವು ನಿಜವಾದ ಮೊಲ್ಲಾಗರ ಆಗಬಹುದು, ಇಲ್ಲವೆ ಪೂರ್ತಿನಿಂತೇ ಹೋಗಬಹುದು.

ಅಪೂರ್ವವಾಗಿ, ಯಾವ ಮುನ್ಸೂಚನೆಯೂ ಇಲ್ಲದೆ ಮೈಯಲ್ಲಿನ ಸ್ನಾಯುಗಳು ಇದ್ದಕ್ಕಿದ್ದಂತೆ ಸಡಿಲ ಬಿದ್ದುಹೋಗಿ ಮಗು ಮುದ್ದೆಯಾಗಿ ಕುಸಿದು ಬೀಳಬಹುದು. ಇದು ಅಚರ (ಏಕೈನೆಟಿಕ್) ಸೆಳವು. ಕೂಡಲೇ ಚೇತರಿಸಿಕೊಳ್ಳುವುದಾದರೂ ಮಗುವಿನ ಮೈಮೂಳೆಗಳು ಮುರಿವುದು ಹೆಚ್ಚಲ್ಲ.

ಅರಿವು ತಪ್ಪದೆಯೇ ಮೊಗದ ಒಂದು ಪಕ್ಕದಲ್ಲೋ ಒಂದು ಕೈಯಲ್ಲೋ ಕಾಲಲ್ಲೋ ಸೆಳವಿನ ನಡುಕ ಕಾಣಿಸಿಕೊಂಡು ಹೋಗುವ ಚಾಲಕಸೆಳವನ್ನು ಫೋಕಲರ್ ಮೋಟಾರ್ ಫಿಟ್ಸ್ ಎನ್ನುವುದುಂಟು.

ನೋಟ, ಆಲಿಕೆ, ಮುಟ್ಟುವಿಕೆ, ನೋವು, ಮೂಸುವಿಕೆ, ರುಚಿ ನೋಡುವಿಕೆಗಳ ಭ್ರಮೆಗಳಾಗಿ ಅರಿವಿನ ಸೆಳವು ಆಗಬಹುದು. ಹೊಟ್ಟೆಯಲ್ಲಿ ಸಮಾಧಾನ ಇಲ್ಲವಾಗೋ ಒಂದೆಡೆ ನಡುಕವಾಗೋ ತೋರಲೂಬಹುದು. ಮರೆವು ಅವರಿಸಬಹುದು. ಇವೆಲ್ಲ ಘೋರಾಮಾಲೆಯ ಸೆಳವರಿವಿನ ಮುನ್ಸೂಚಕಗಳಾಗಿ ಬರುವುದೇ ಸಾಮಾನ್ಯ.

ಮನೋಚಾಲಕ (ಸೈಕೊಮೋಟಾರ್) ಸೆಳವು, ಇಲ್ಲವೇ ಮೊಲ್ಲಾಗರದ ಬದಲಿ ಎಂಬುದು ಬಲು ಅಪೂರ್ವವಾಗಿ ಮೊಲ್ಲಾಗರವಾಗೋ ಇತರ ಸೆಳವುಗಳ ಒಂದಿಗೋ ಬರುವುದಾದರೂ ರೋಗಿಯ ನಡೆವಳಿಕೆ, ಸಮಾಜದ ದಿಟ್ಟಿಯಿಂದ ಬಲು ಮುಖ್ಯ. ಸೆಳವಿಗೆ ಬದಲಾಗಿ ಮನಸ್ಸು ಕೆಡುತ್ತದೆ. ಆದರೆ, ಪೂರ್ತಿ ಎಚ್ಚರ ತಪ್ಪುವುದು ಅಪೂರ್ವ. ರೋಗಿ ಕಕ್ಕಾಬಿಕ್ಕಿಯಾಗಿ ಎಲ್ಲೆಂದರಲ್ಲಿ ಗೊತ್ತುಗುರಿಯಿಲ್ಲದೆ ಅಲೆದಾಡಬಹುದು; ಕೈಗೆ ಸಿಕ್ಕಿದ್ದನ್ನು ಹೊಡೆಯಬಹುದು, ಹಾಳುಮಾಡಬಹುದು; ಹುಚ್ಚು ಹುಚ್ಚಾಗಿ ಅರಚಿ, ಕೂಗಾಡಿ, ಗಲಾಟೆ ಮಾಡಬಹುದು, ರೊಚ್ಚಿಗೇಳಬಹುದು, ಇಲ್ಲವೆ ತೆಪ್ಪಗೆ ಬಿದ್ದಿರಬಹುದು; ಸುಮ್ಮನೆ ಅತ್ತಿಂದಿತ್ತ ಅಡ್ಡಾಡುತ್ತ. ಇಲ್ಲವೆ ಮೆಟ್ಟಿಲುಗಳನ್ನು ಏರುತ್ತ ಇಳಿಯುತ್ತಿದ್ದು, ಸರಕ್ಕನೆ ಸುಮ್ಮನಾಗಬಹುದು. ಹೀಗೆ ಕೆಲವು ಮಿನಿಟು ಏನು ಮಾಡಿದ್ದರೂ ಆ ಮೇಲೆ ರೋಗಿಗೆ ಏನೊಂದೂ ನೆನಪಿರದು. ಇದಕ್ಕಿದ್ದಂತೆ ಹುಚ್ಚುಚ್ಚಾಗಿ ಆಡುವ ಮಂದಿಗೆ ಈ ಬೇನೆ ಇರುವುದೇ ಎಂದು ತೋರಿಸಿ ನೋಡಬೇಕು.

ಹಸುಗೂಸುಗಳಲ್ಲಿ ಜ್ವರ ಬಂದು ಸೆಳವು ಕಂಡರೆ ಹೆತ್ತವರಿಗಂತೂ ವಿಪರೀತ ಗಾಬರಿ ಆಗುವುದು ಹೆಚ್ಚಲ್ಲ. ಎಳೆತನದ ಸೆಳವು ಮುಂದೆ ಮೊಲ್ಲಾಗರ ಆಗುವ ಸೂಚನೆಯೇ? ಇದಕ್ಕೆ ನೇರವಾದ ಉತ್ತರವಿಲ್ಲ. ಬಹುಪಾಲು ಈ ಸೆಳವುಗಳು ಮೊಲ್ಲಾಗರದವಲ್ಲ. ಆದರೆ ನೂರಕ್ಕೆ 2-5 ಮೊಲ್ಲಾಗರದ ರೋಗಿಗಳಿಗೆ ಎಳೆತನದಲ್ಲಿ ಸೆಳವಾಗಿರುವುದು. ಹಸುಗೂಸುಗಳಲ್ಲಿ ಯಾವ ಕಾರಣದಿಂದಲೇ ಆಗಲಿ ಜ್ವರ ಏರಿದರೆ, ಸೆಳವುಗಳು ತೋರುವುದು ತೀರ ಸಾಮಾನ್ಯಲಕ್ಷಣ. ನಾಲ್ಕೆಂಟು ವರ್ಷ ದಾಟಿದ ಮೇಲೆ ಹೀಗಾಗದು. ಜ್ವರವಿಲ್ಲದೆ ಚೆನ್ನಾಗಿರುವಾಗ ಇದ್ದಕ್ಕಿದ್ದಂತೆ ಕಾರಣವಿಲ್ಲದೆ ಸೆಳವು ಕಂಡರೆ ಮೊಲ್ಲಾಗರ ಅಲ್ಲವೆಂದು ವೈದ್ಯನೇ ಹೇಳಬೇಕು. ಹುಟ್ಟುವಾಗಲೇ ತಲೆಗೆ ಪೆಟ್ಟಾಗೋ ಮಿದುಳು ಪೊರೆಯುರಿತ (ಮೆನಿಂಜೈಟಿಸ್) ಆದ ಮೇಲೋ ತಲೆಯಲ್ಲಿ ನೀರು ಸೇರಿ ದೊಡ್ಡದಾಗೋ ಇದ್ದರೆ ಸೆಳವು ಬರುತ್ತಿರಬಹುದು.

ನಿದಾನ: ಎಲ್ಲೋ ಒಂದೊಂದು ಬಾರಿ ಕಂಡು, ರೋಗದ ಲಕ್ಷಣಗಳು ಯಾವುವೂ ಉಳಿಯದ್ದರಿಂದ ಒಬ್ಬ ರೋಗಿಗೆ ಮೊಲ್ಲಾಗರ ಇದೆಯೆಂದು ಹೇಳುವುದು ಯಾವಾಗಲೂ ಸುಲಭವಲ್ಲ. ಇದರಿಂದ ತಮಗೆ ಏನಾಗುವುದೆಂದು ಹೇಳುವ ರೋಗಿಯ, ಅವನ ಒಂದಿಗರ ಹೇಳಿಕೆಗಳೇ ಆಧಾರವಾಗುತ್ತವೆ. ರೋಗಿ ಆರೋಗ್ಯವಾಗಿದ್ದರೂ ಒಂದು ಬಗೆಯ ಅಲಸಿಕೆ, ಸೋಮಾರಿತನ, ತೂಕಡಿಕೆ, ಜೊಂಪು ಇವೊಂದಿಗೆ ಚುರುಕಿಲ್ಲದೆ ಮೊದ್ದಾಗಿರುವನು.

ಮಿದುಳಿಗೆ ತಾಕಿದ ಪೆಟ್ಟು, ಗಾಯ, ವಿಷಕಾರಕಕ್ಕೆ ಒಡ್ಡಿರುವಿಕೆ, ತಲೆಬುರುಡೆಯೊಳಗೆ ಸೊಂಕು, ರಕ್ತಸುರಿಕೆ, ಬಹುಕಾಲ ಆಮ್ಲಜನಕವಿರದೆ ಇರುವಿಕೆ ಇವುಗಳಿಂದ ಆಮೇಲೆ ಸೆಳವುಗಳು ಆಗಿಬಂದಿವೆ. ಇವನ್ನು ಲಕ್ಷಣದ, ಜೈವಿಕ, ಮರುಚಲದ ಬಗೆಗಳ ಮೊಲ್ಲಾಗರ ಎನ್ನುವುದುಂಟು. ಮೇಲಿಂದ ಮೇಲೆ ಸೆಳವುಗಳು ಬರುತ್ತಿದ್ದರೂ ಮೇಲಿನ ಯಾವ ಕಾರಣಗಳೂ ಇಲ್ಲದ್ದೇ ತನುರೋಗದ (ಈಡಿಯೊಪತಿಕ್), ಮೂಲದ, ದಿಟವಾದ ಮೊಲ್ಲಾಗರ.

ಮಿದುಳಲ್ಲಿನ ನಮೆತ (ಅಟ್ರೊಫಿ), ಹಳೆಯ ಗಾಯದ ಕಲೆಗಳು, ಹೆರವಸ್ತುಗಳು, ರಕ್ತನಾಳಗಳ ವಿಚಿತ್ರಗಳು ಇದ್ದು ಮೊಲ್ಲಾಗರ ಆಗಿರುವುದನ್ನು ರೋಗಿಯ ಹೇಳಿಕೆಯಿಂದಲೋ ಪರೀಕ್ಷೆಯಿಂದಲೋ ತಿಳಿಯುವುದು ಅನುಮಾನವಾದಾಗ ನಿರ್ಧರಿಸಲು ಹಲವಾರು ಉಪಾಯಗಳಿವೆ. ಅಂಥ ಕಾರಣ ಇರುವುದನ್ನೂ ಇರುವ ತಾವನ್ನೂ ಖಚಿತಪಡಿಸಲು ಪರೀಕ್ಷೆಗಳಿವೆ; ಸಿ.ಟಿ. ಸ್ಕ್ಯಾನ್ ಮತ್ತು ಎಂ.ಆರ್.ಐ.

ಮಿದುಳಲ್ಲಿರುವ ಪೊಳ್ಳುಗಳಲ್ಲಿನ ದ್ರವವನ್ನು ಹೊರದೆಗೆದು ಸದ್ಯಕ್ಕೆ ಗಾಳಿ, ಆಮ್ಲಜನಕ, ಮತ್ತಿತರ ಯಾವುದಾದರೂ ತಕ್ಕ ಅನಿಲವನ್ನು ಒಳಗೆ ಬಿಟ್ಟು ಎಕ್ಸ್-ಕಿರಣ ಚಿತ್ರಗಳನ್ನು ತೆಗೆದರೆ (ಗಾಳಿಮಿದುಳಚಿತ್ರಣ) ಮಿದುಳಿನ ಒಳಗಿನ ಆಕಾರಗಳ ವ್ಯತ್ಯಾಸಗಳನ್ನು ತೋರುವುದರಿಂದ, ರೋಗಿಗೆ ಅನುಕೂಲಿಸಲು ಶಸ್ತ್ರವೈದ್ಯನಿಗೆ ನೆರವಾಗುತ್ತದೆ.
ಮಿದುಳಿನ ಬೇರೆಬೇರೆ ಭಾಗಗಳಲ್ಲಿ ಯಾವಾಗಲೂ ಆಗುತ್ತಿರುವ ವಿದ್ಯುತ್ತಿನ ಹರಿವಿನ ಕಿರಿಕಿರಿಯ ವ್ಯತ್ಯಾಸಗಳನ್ನು ವಿದ್ಯುನ್ಮಿದುಳಚಿತ್ರಕದಲ್ಲಿ ಗುರುತಿಸಬಹುದು. ಇದರಲ್ಲಿ ಕಂಡ ವಿದ್ಯುತ್ತಿನ ಹರಿವಿನ ಅಸಹಜತೆಗಳಿಗೂ ಸೆಳವಿನ ಬಗೆಗೂ ಬಹುಮಟ್ಟಿಗೆ ನೇರ ಸಂಬಂಧ ಇರುವುದು ಗೊತ್ತಿದೆ. ಆರೋಗ್ಯವಂತರ ವಿದ್ಯುತ್ತಿನ ಆಲ್ಫ ಅಲೆಗಳ ವೇಗ ಸೆಕೆಂಡಿಗೆ 8 ರಿಂದ 13 (ಸರಾಸರಿ 10) ಇದ್ದು, ಎತ್ತರ 20-60 ಮೈಕ್ರೊವೋಲ್ಟ್‍ಗಳಿರುವುದು. ಪೆಟಿಟ್‍ಮಾಲ್ ಈ ಗೆರೆಚಿತ್ರಗಳಲ್ಲಿ ಚೂಪಾಗಿ ಮೊನೆ ಎದ್ದ ಮೇಲೆ ಗುಬಟಿನಂತಿರುವ ಎತ್ತರದ ವಿಧಾನದ ಅಲೆ ಬರುವುದು. 

ಚಿತ್ರ-1

ಇವು ಸೆಕೆಂಡಿಗೆ ಮೂರರಂತೆ ಇರುತ್ತವೆ. ಗ್ರಾಂಡ್‍ಮಾಲ್‍ನ ಗೆರೆಚಿತ್ರದಲ್ಲಿ ಎತ್ತರದ ಚೂಪುಮೊನೆಗಳು ಸೆಕೆಂಡಿಗೆ 15-40 ಇರುತ್ತವೆ. ಈ ಸೆಳವಿಗೆ ಮುಂಚೆ ಅಲೆಗಳಿಲ್ಲದೆ ನೀಟಾಗಿರುವುದು ಮನೋಚಾಲಕ ಮೊಲ್ಲಾಗರದ ಈ ಗೆರೆಚಿತ್ರಗಳು ಬಗೆಬಗೆಯಾಗಿ ಇರುವುದರಿಂದ ಗುರುತಿಸುವುದು ಕಷ್ಟ.

ಚಿತ್ರ-2

ಎಡೆಗೂರಿದ ಮೊಲ್ಲಾಗರದಲ್ಲಿನ ವಿದ್ಯುನ್ಮಿದುಳ ಚಿತ್ರದ ರೂಪ ಕಾರಣಕ್ಕೆ ತಕ್ಕಂತೆ ಬೇರೆಬೇರೆ ಆಗಿರುವುದು. ಮಿದುಳಲ್ಲಿ ಗಂತಿಯೋ ಗಾಯವೋ ಆಗಿದ್ದಲ್ಲಿ, ಕೆಟ್ಟಿರುವ ನರಕಣಗಳಿಂದ ಸೆಕೆಂಡಿಗೆ 0.5-3.5 ಸುತ್ತುಗಳ (ಡೆಲ್ಟ) ಅಲೆಗಳು ಏಳುತ್ತವೆ. ವಿದ್ಯುದ್ದಣೆಗಳನ್ನು (ಇಲೆಕ್ಟ್ರೋಡ್ಸ್) ಮಿದುಳಿನ ಬೇರೆಬೇರೆ ತಾವಿನಲ್ಲಿ ಸರಿಯಾಗಿ ಗುರುತಿಸಿ ಇಡುತ್ತ ಬಂದರೆ ಕೆಟ್ಟಿರುವ ಭಾಗವನ್ನು ಖಚಿತಪಡಿಸಬಹುದು.

ಇಷ್ಟೆಲ್ಲ ನೆರವು ವಿದ್ಯುನ್ಮಿದುಳ ಚಿತ್ರಣದಿಂದ ದೊರೆತರೂ ರೋಗ ನಿದಾನದಲ್ಲಿ ಇದರದೇ ಕೊನೆಯ ಮಾತಲ್ಲ. ರೋಗಿಯನ್ನು ಚೆನ್ನಾಗಿ ಪರೀಕ್ಷಿಸುವುದಕ್ಕೆ ತುಸು ನೆರವು ಈವುದಷ್ಟೆ. ಅಲ್ಲದೆ ಈ ಚಿತ್ರಗಳು ಇದರ ಪರಿಣತರಿಗೆ ಮಾತ್ರ ನಿಜವಾದ ಅರ್ಥ ತೋರುವುವು. ಮೊಲ್ಲಾಗರದ ಸೆಳವಿರದೆ ಬಿಡುವಿನ ಹೊತ್ತಿನಲ್ಲೂ ನೂರಕ್ಕೆ 85 ರೋಗಿಗಳಲ್ಲಿ ಈ ಗೆರೆಚಿತ್ರಗಳಲ್ಲಿ ಏನಾದರೂ ಅಸಹಜತೆ ತೋರುತ್ತದೆ. ವಿದ್ಯುನ್ಮಿದುಳ ಚಿತ್ರಣದಿಂದ ಕಾರಣ ತಿಳಿವುದಲ್ಲದೆ, ರೋಗನಿದಾನದಲ್ಲೂ ನೆರವಾಗುವುದು. ಮೊಲ್ಲಾಗರ ರೋಗಿಗಳಲ್ಲಿ 6% ಮಂದಿಯಲ್ಲಿ ಯಾವ ವ್ಯತ್ಯಾಸಗಳೂ ಇರವು. ಹಾಗೇ ಎಂದಿಗೂ ರೋಗಿಯಾಗಿ ಕಂಡಿರದ ಶೇಕಡ 6-10 ಮಂದಿಯಲ್ಲಿ ರೋಗದ ಗೆರೆಚಿತ್ರಗಳು ಕಂಡಿವೆ. ಪುಟ್ಟಾಮಾಲೆ ಮೊಲ್ಲಾಗರ ಇದಕ್ಕೆ ಹೊರತು.

ಚಿತ್ರ-3

ಕಾರಣಗಳು: ಮೊಲ್ಲಾಗರದ ಮೂಲ ಕಾರಣಗಳು ಇನ್ನೂ ಗೊತ್ತಿಲ್ಲ. ಆದರೂ ಈಡಾಗುವವರಲ್ಲಿ ಮೊಲ್ಲಾಗರವನ್ನು ಕೆರಳಿಸುವ ಹಲವಾರು ಕಾರಣಗಳು ತಿಳಿದಿವೆ. ಹೊರಗಿನ ಕಾರಣಗಳಿಂದ ಬಂದವು ಒಂದು ಗುಂಪಾದರೆ, ಮೈಯಲ್ಲಿ ಹುಟ್ಟಿದವು ಇನ್ನೊಂದು ಗುಂಪಿನಲ್ಲಿವೆ. ಮೊಲ್ಲಾಗರಗಳಲ್ಲಿ ಮೊದಲಿನದು 20% ಮಂದಿಗಿರುವುದು.

ಹೊರ ಕಾರಣಗಳಿಂದ ಬಂದ, ಗಾಯದಿಂದಾದ. ರೋಗ ಲಕ್ಷಣ ತೋರುವ ಮೊಲ್ಲಾಗರದಲ್ಲಿ ಕಂಡಂತೆಯೇ ಮಿದುಳಲ್ಲಿ ಏನಾದರೂ ಕೊರೆಯೋ ಅಸಹಜತೆಯೋ ಇರುವುದು. ಹೆರಿಗೆ ಕಷ್ಟವಾಗಿ ಕೂಸು ಹೊರಬೀಳುವಾಗ ಆದ ಗಾಯ, ಪೆಟ್ಟುಗಳು, ತಲೆಯ ಗಾಯಗಳು, ಮಿಕುಳಿನ ಕುರು ಇಲ್ಲವೇ ಗಂತಿ ಗೆಡ್ಡೆಗಳು, ಮಿದುಳಲ್ಲಿ ರಕ್ತ ಸುರಿದೋ ಗರಣೆಯಾಗೋ ಉಳಿದ ಕಲೆಗಳು ಇವೆಲ್ಲ ಕಾರಣಗಳು.

ಮೈಯಲ್ಲಿ ಹುಟ್ಟಿದ ಮೊಲ್ಲಾಗರದಲ್ಲಿ ರೋಗದ ಕಾರಣಗಳೇ ಖಚಿತವಿಲ್ಲ. ಮೊಲ್ಲಾಗರ ವಂಶಾನುಗತವೆಂಬ ನಂಬುಗೆ ಬಲವಾಗಿದೆ. ಒಂದು ಪರಿಣತರು ಹೇಳುವಂತೆ, ಮಿದುಳಿನ ಕೆಡುಕಿನ ಈಡು ವಂಶಾನುಗತವೇ ಹೊರತು ರೋಗವಲ್ಲ; ಆದ್ದರಿಂದ ಈ ರೋಗದ ಬಗ್ಗೆ ಭಯ/ಚಿಂತೆ ಬೇಡ. ಮಿದುಳಿಗೆ ಪೆಟ್ಟಾದವರೆಲ್ಲರಿಗೂ ಮೊಲ್ಲಾಗರ ಬರುವುದಿಲ್ಲ.
ಮುಂದೇನು? : ನರರೋಗಶಾಸ್ತ್ರ ಆಗಾಧವಾಗಿ ಮುನ್ನಡೆ ಸಾಧಿಸುತ್ತಿವೆ. ಬೇಗನೆ ಸೆಳವುಗಳನ್ನು ಗುರುತಿಸಿ, ಚಿಕಿತ್ಸೆಯಿಂದ ಹತೋಟಿಗೆ ತಂದಷ್ಟೂ ಮತ್ತೆ ಮರುಕಳಿಸದೆ ಇರುವುದು. ಮೊಲ್ಲಾಗರದ ಗತಿಯನ್ನು ಹೀಗೆನ್ನುವಂತಿಲ್ಲ. ಸೆಳವಿಂದ ಬಿಡುವಾದ ದಿನಗಳನ್ನೂ ಸೂಚಿಸುವ ಹಾಗಿಲ್ಲ. ಮಿದುಳಿನ ಕೆಡುಕನ್ನು ಎಳೆಯದರಲ್ಲೇ ಅಣಗಿಸುವುದು ಸುಲಭ.
ಚಿಕಿತ್ಸೆ : ಮೊಲ್ಲಾಗರದಲ್ಲಿ ಸೆಳವುಗಳು ಬರದಂತೆ ಮಾಡುವುದೇ ವಾಸಿ ಮಾಡಿದ ಹಾಗೆ. ಆಹಾರ ಪುಷ್ಟಿಕರವಾಗಿ ಇರಬೇಕೇ ಹೊರತು, ಯಾವ ಪಥ್ಯವೂ ಇಲ್ಲ. ಮದ್ಯಸೇವನೆ ಬೇಡ. ರೋಗಿಯ ಉಪವಾಸದಿಂದ, ನಿದ್ರೆಗೆಡುವುದರಿಂದ ರೋಗ ಮರುಕಳಿಸುತ್ತದೆ.

ಸೆಳೆವುಗಳನ್ನು ಸರಳವಾಗಿ ಚೆನ್ನಾಗಿ ಅಣಗಿಸಲು ಮದ್ದುಗಳ ಸಮನಿಲ್ಲ. ಫೀನೊಬಾರ್ಬಿ ಟೋನ್, ಫೆನಿಟಾಯಿನ್, ಕಾರ್ಬಮಜೆವಿನ್ ಸೋಡಿಯಂವಾಲ್ ಪ್ರೂಯೆಂಟ್‍ಗಳಿಂದ ಸೆಳವುಗಳು ನಿಲ್ಲುತ್ತವೆ. ಕೆಡುಕಿಲ್ಲದೆ ವರ್ಷಗಟ್ಟಳೆ ಸೇವಿಸುತ್ತಿರಬಹುದು. ಯಾವ ರೋಗಿಗೆ ಯಾವ ಮದ್ದು ಒಗ್ಗುವುದೆಂದು ವೈದ್ಯನ ನೆರವಿನಿಂದ ಕಂಡುಕೊಂಡು ಸೇವಿಸಬೇಕು. ಒಂದೊಂದು ಮದ್ದನ್ನೂ ತಿಂಗಳುಗಟ್ಟಳೆ ಕೊಟ್ಟು ನೋಡಬೇಕಾಗುವುದು. ಮೂರರಿಂದ ಐದು ವರ್ಷಗಳ ಕಾಲ ರೋಗ ಕಾಣಿಸಿಕೊಳ್ಳದಿದ್ದರೆ, ಔಷಧಿಯನ್ನು ಸ್ವಲ್ಪ ಸ್ವಲ್ಪವಾಗಿ ನಿಲ್ಲಿಸಬಹುದು.

ಮಿದುಳಿನ ಮೇಲೆ ಇತ್ತೀಚೆಗೆ ಶಸ್ತ್ರಕ್ರಿಯೆಗಳು ಆಗುತ್ತಿವೆ. ಮಿದುಳಲ್ಲಿ ಪೆಟ್ಟಾಗೋ ಏನಾದರೂ ಗೆಡ್ಡೆ ಬೆಳೆದೋ ಇದ್ದರೆ ಶಸ್ತ್ರಕ್ರಿಯೆಯಿಂದ ಅನುಕೂಲ ಆಗಬಹುದು. 

ತಕ್ಕ ಚಿಕಿತ್ಸೆ ಕೊಡುತ್ತಿದ್ದು ರೋಗಿಯನ್ನು ಆದಷ್ಟು ಮಟ್ಟಿಗೆ ಎಂದಿನ ಜೀವನದಲ್ಲಿ ಆರಾಮವಾಗಿ ಬಾಳುವಂತೆ ಎಲ್ಲ ಅನುಕೂಲತೆಗಳನ್ನೂ ಒದಗಿಸಬೇಕು. ಹಾಗೇ ಎಳೆಯ ರೋಗಿಗಳಿಗೂ ಕಲಿಕೆಯ ವಿಶೇಷ ಅವಕಾಶಗಳನ್ನು ಕೊಡಬೇಕು. ಮೊಲ್ಲಾಗರದ ರೋಗಿಗಳಿಂದಾಗುವ ಕೆಲಸಗಳಲ್ಲಿ ಅವರನ್ನು ತೊಡಗಿಸಬೇಕು. ಚಲಿಸುವ ಗಾಡಿ, ಯಂತ್ರಗಳಿಂದ ದೂರ ಇರಿಸಬೇಕು. ರೋಗಿಗಾಗಲಿ, ರೋಗಿಯಿಂದ ಇತರರಿಗಾಗಲಿ ಅಪಾಯ ತಟ್ಟದಂತೆ ನೋಡಿಕೊಳ್ಳಬೇಕು.
ಮೊಲ್ಲಾಗರದ ಸೆಳವು ಬಂದಾಗ, ಮೊದಲ ನೆರವಾಗಿ, ರೋಗಿಯನ್ನು ನೆಟ್ಟಗೆ ಮಲಗಿಸಬೇಕು. ಬಿಗುವಾಗಿರುವ ಕೊರಳಪಟ್ಟಿ ಮತ್ತಿತರ ತೊಡುಗೆಗಳನ್ನು ಸಡಿಲಿಸಬೇಕು. ಕೃತಕ ಹಲ್ಲುಗಳಿದ್ದರೆ ತೆಗೆದಿಡಬೇಕು. ರೋಗಿಯ ಕೈಕಾಲು ತಾಗದಂತೆ ಉಳಿದವರು ದೂರ ಸರಿಯಬೇಕು. ಕೈಕಾಲುಗಳನ್ನು ಹಿಡಿದಿಡಬಾರದು. ಜೊಲ್ಲೋ ವಾಂತಿಯೋ ಬರುವುದಾದರೆ, ಮೊಗವನ್ನು ಪಕ್ಕಕ್ಕೆ ತಿರುಗಿಸಬೇಕು. ಮೊದಲೇ ಕಂಡರೆ ಉಂಟುಮಾಡಿರುವ ಕೈವಸ್ತ್ರವನ್ನು ಹಲ್ಲುಗಳ ನಡುವೆ ಇಡಬಹುದು. ಬಲವಂತದಿಂದ ತೂರಿಸಬಾರದು. ರೋಗಿ ಚೆನ್ನಾಗಿ ಎಚ್ಚೆತ್ತುಕೊಳ್ಳುವ ತನಕ ಬಾಯಿಂದ ಏನೂ ಕೊಡಬಾರದು.
		
(ಎಸ್.ಟಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ